ಟ್ರಾನ್ಸ್‍ಡ್ಯೂಸರ್
ಒಂದು ರೂಪದಲ್ಲಿರುವ ಶಕ್ತಿಯನ್ನು ಸ್ವೀಕರಿಸಿ ಅದನ್ನು ಮತ್ತೊಂದು ರೂಪದ ಶಕ್ತಿಯಾಗಿ ಮಾರ್ಪಡಿಸುವ ಸಾಧನ. ಇದರ ನಿವೇಶ (ಇನ್‍ಪುಟ್) ಮತ್ತು ನಿರ್ಗಮ (ಔಟ್‍ಪುಟ್) ಶಕ್ತಿಗಳು ಒಂದೇ ರೂಪದಲ್ಲಿರದಿದ್ದರೂ ನಿರ್ಗಮ ಶಕ್ತಿ ಹೊಂದುವ ಬದಲಾವಣೆ ಮತ್ತು ಅದರ ಪರಿಮಾಣಗಳು ನಿವೇಶ ಶಕ್ತಿಗೆ ಅನುಗುಣವಾಗಿವೆ. ಟ್ರಾನ್ಸ್‍ಡ್ಯೂಸರಿನ ನಿವೇಶ ಮತ್ತು ನಿರ್ಗಮ ಶಕ್ತಿಗಳು ಯಾವುದೇ ರೂಪದಲ್ಲಿರಬಹುದಾದರೂ ಸಾಮನ್ಯವಾಗಿ ನಿರ್ಗಮ ಶಕ್ತಿಯೂ ವಿದ್ಯುತ್ ರೂಪದಲ್ಲೇ ಇರುವುದು. ವಿದ್ಯುತ್ತನ್ನು ಸುಲಭವಾಗಿ ಸಾಗಿಸುವ, ವರ್ಧಿಸುವ ಮತ್ತು ಅಳೆಯುವ ಸಾಧ್ಯತೆಯಿರುವುದೇ ಟ್ರಾನ್ಸ್‍ಡ್ಯೂಸರಿನ ನಿರ್ಗಮ ಸಾಮಾನ್ಯವಾಗಿ ವಿದ್ಯುತ್‍ರೂಪದಲ್ಲಿರುವುದಕ್ಕೆ ಕಾರಣ.

	ಟ್ರಾನ್ಸ್‍ಡ್ಯೂಸರಿಗೆ ಒಂದು ಉತ್ತಮ ಉದಾಹರಣೆಯೆಂದರೆ ಮೈಕ್ರೊಫೋನ್. ಇದು ಶಬ್ದಸಂಜ್ಞೆಗಳನ್ನು ಸ್ವೀಕರಿಸಿ, ಅವುಗಳಿಗೆ ಅನುಗುಣವಾದ ವಿದ್ಯುತ್ ಸಂಜ್ಞೆಗಳನ್ನು ಉಂಟುಮಾಡುತ್ತದೆ. ಟ್ರಾನ್ಸ್‍ಡ್ಯೂಸರಿನ ನಿರ್ಗಮ ಸಾಮಾನ್ಯವಾಗಿ ವಿದ್ಯುತ್ ರೂಪದಲ್ಲಿರಬೇಕಾದ್ದರಿಂದ, ನಿವೇಶ ಶಕ್ತಿಯಲ್ಲಿ ಆಗುವ ವ್ಯತ್ಯಾಸಗಳಿಗೆ ಅನುಗುಣವಾಗಿ ವಿದ್ಯುತ್ತಿನ ಯಾವುದೊಂದು ಪರಿಮಾಣ ವ್ಯತ್ಯಾಸ ಹೊಂದುವಂತೆ ಟ್ರಾನ್ಸ್‍ಡ್ಯೂಸರನ್ನು ಸಂಯೋಜನೆಗೊಳಿಸಬೇಕಾಗುತ್ತದೆ. ನಿವೇಶ ಶಕ್ತಿಯಲ್ಲಿ ವ್ಯತ್ಯಾಸ ಉಂಟಾದಾಗ ರೋಧ (ರೆಸಿಸ್ಟನ್ಸ್), ಧಾರಣತೆ (ಕ್ಯಪಾಸಿಟೆನ್ಸ್). ಪ್ರೇರಣತ್ವ (ಇಂಡಕ್ಟೆನ್ಸ್). ವಿಭವಾಂತರ (ಪೊಟೆನ್ಷಿಯಲ್ ಡಿಫರೆನ್ಸ್) ಮೊದಲಾದ ವಿದ್ಯುತ್ ಪರಿಮಾಣಗಳಲ್ಲಿ ಅನುಗುಣವಾದ ವ್ಯತ್ಯಾಸಗಳುಂಟಾಗಿ ಟ್ರಾನ್ಸ್‍ಡ್ಯೂಸರಿನ ನಿರ್ಗಮ ವಿಭಾಗದಲ್ಲಿ ವಿದ್ಯುತ್ ರೂಪದ ಸಂಜ್ಞೆ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ, ಪೀeóÉೂೀ ವೈದ್ಯುತ ಹರಳುಗಳ ಮೇಲೆ ಒತ್ತಡವನ್ನು ಹೇರಿದಾಗ ಅವು ವಿದ್ಯುತ್ ವಿಭವಾಂತರವನ್ನು ಉಂಟುಮಾಡುತ್ತವೆ. ದ್ಯುತಿವಿದ್ಯುತ್‍ಕೋಶಗಳು ತಮ್ಮ ಮೇಲೆ ಪತನವಾಗುವ ಬೆಳಕಿಗೆ ಅನುಗುಣವಾಗಿ ವಿದ್ಯುತ್ ವೋಲ್ಟೇಜನ್ನು ಉತ್ಪಾದಿಸುವುವು. ಟ್ರಾನ್ಸ್‍ಡ್ಯೂಸರಿನಿಂದ ಲಭಿಸುವ ನಿರ್ಗಮ ಸಂಜ್ಞೆಯನ್ನು ಅಗತ್ಯವೆನಿಸಿದರೆ ಪ್ರವರ್ಧನಗೊಳಿಸಬಹುದು ಮತ್ತು ಉದ್ದಿಷ್ಟ ಕಾರ್ಯಕ್ಕೆ ಅನುಗುಣವಾಗಿ ಸೂಕ್ತ ಅಳವಡಿಕೆಯನ್ನು ಮಾಡಿಕೊಳ್ಳಲೂಬಹುದು. ಭೌತ ಪರಿಮಾಣಗಳ ಮಾಪನ ಮತ್ತು ನಿಯಂತ್ರಣ ವಿಧಾನಗಳಲ್ಲಿ ಟ್ರಾನ್ಸ್‍ಡ್ಯೂಸರುಗಳ ಉಪಯೋಗ ಬಹುವಾಗಿ ಉಂಟು.
(ಎಂ.ಎಚ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ